ಧ್ರುವ 3 -
ಸ್ವಾಯಂಭವ ಮನುವಿನ ಮೊಮ್ಮಗ ಉತ್ತನಪಾದರಾಜನ ಹಿರಿಯ ಹೆಂಡತಿ ಸುನೀತಿ ಎಂಬಾಕೆಯಲ್ಲಿ ಜನಿಸಿದವ. ಒಮ್ಮೆ ಉತ್ತಾನಪಾದ ತನ್ನ ಕಿರಿಯ ಹೆಂಡತಿ ಸುರುಚಿಯ ಮಗ ಉತ್ತಮನನ್ನು ತೊಡೆಯ ಮೇಲೆ ಕೂರಿಸಿಕೊಂಡಿದ್ದಾಗ ಧ್ರುವನೂ ತಂದೆಯ ತೊಡೆಯ ಮೇಲೆ ಕುಳಿತುಕೊಳ್ಳಲು ಆಸೆಪಟ್ಟ. ಆಗ ಸುರುಚಿ ಸಿಂಹಾಸನ ಏರುವ ಭಾಗ್ಯ ನಿನಗೆ ಎಲ್ಲಿ ಬರಬೇಕು? ಕಾಡಿಗೆ ಹೋಗಿ ತಪಸ್ಸು ಮಾಡಿ ನನ್ನ ಬಸಿರಲ್ಲಿ ಜನಿಸಿದರೆ ನಿನಗೆ ಆ ಭಾಗ್ಯ ಸಿಕ್ಕುತ್ತದೆ ಎಂದು ಗದ್ದರಿಸಿದಳು. ದುಃಖಿತನಾದ ಧ್ರುವ ತನ್ನ ತಾಯಿಗೆ ವಿಷಯ ತಿಳಿಸಿ ಕಾಡಿಗೆ ಹೊರಟ. ಅಲ್ಲಿ ಆಕಸ್ಮಿಕವಾಗಿ ಭೇಟಿಯಾದ ಸಪ್ತರ್ಷಿಗಳಿಂದ ಮಂತ್ರೋಪದೇಶ ಪಡೆದ. ಅನಂತರ ಘೋರ ತಪಸ್ಸನ್ನಾಚರಿಸಿ ವಿಷ್ಣುವನ್ನು ಪ್ರತ್ಯಕ್ಷ ಮಾಡಿಕೊಂಡು ದೀರ್ಘಾಯುಷ್ಯವನ್ನೂ ಭೂಲೋಕದಲ್ಲಿ ಏಕಚ್ಛತ್ರಾಧಿಪತ್ಯವನ್ನೂ ಪಡೆದನಲ್ಲದೆ ನಕ್ಷತ್ರವಾಗಿ ಊಧ್ರ್ವಲೋಕದಲ್ಲಿ ಶಾಶ್ವತ ಸ್ಥಾನವನ್ನು ಸಂಪಾದಿಸಿದ.			(ಆರ್.)

ಈ ಹೆಸರಿನ ಇನ್ನೊಬ್ಬ ಕಳಿಂಗ ದೇಶದ ಅರಸು. ಈತ ದುರ್ಯೋಧನನ ಪರವಾಗಿ ಹೋರಾಡಿ ಭಾರತ ಯುದ್ಧದ ಹದಿನಾಲ್ಕನೆಯ ದಿನದ ರಾತ್ರಿ ಭೀಮನಿಂದ ಹತನಾದ.
	ಚಂದ್ರವಂಶದ ನಹುಷ ರಾಜನ ಮಗನ ಹೆಸರೂ ಧ್ರುವ.							*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ